ಕರೋನಾ ಎಲ್ಲರಿಗ ತ್ರಾಸ ಕೊಟ್ಯಾದ, ಥೊಡೆ ಮಂದಿಗರ ಭಾಳ ತ್ರಾಸ, ಕಷ್ಟ, ನೋವು ಕೊಟ್ಯಾದ. ಸರಕಾರ ಎನ್ ಮಾಡಬೇಕು ಅದು ಇದ್ದಿದ್ದರಾಗ ಛಲೊ ಮಾಡಲತದ. ಸರಕಾರಕ್ಕ ದೊಡ್ಡ ತಾಕತ್
ಅದ, ಅದ್ರ ಜನಸಾಮಾನ್ಯರ ತಾಕತ್ ಅದಕ್ಕಿಂತ ಹೆಚ್ಚಿಗ ಅದ. ಇಂತ ಟೈಮಿನಾಗ ಮಂದಿ ತಮ್ಮ ತಾಕತ್ ತೋರಿಸಬೇಕು, ಕೆಲವರೆಲ್ಲ ತೋರಸಲತಾರ.
ನಮಗಬಿ ಕಷ್ಟ ಅದ ಅಂತ ಕೈಕಟ್ಟಿ ಕುಂತಿಲಾ, ಸಣ್ಣ ಸಣ್ಣ ಕೈಗಳು ಸೇರಿಸಿಕೊಂಡ ಛಲೊ ಕೆಲಸ ಮಾಡ್ಲತಾರ. ಸರಕಾರ ಮಾಡ್ಲತದ ನಾವ್ ಒಂದಿಷ್ಟ ಮಾಡರಿ ಅಂತ ನಾಲ್ಕಾರು ಮನಸಗೊಳ ಅಲ್ಲಲ್ಲಿ ಸೇರಕೊಂಡ ಮಾಡ್ಲತಾರ.
ಈ ವೇಳೆದಾಗ ಹೆಚ್ಚುಕಮ್ಮಿ ಎಲ್ಲ ಬಂದ ಅವ ಭಾಳ ಮಂದಿಗ ಊಟ-ನೀರು ಸಿಗಲ್ದ ಪರಿಸ್ಥಿತಿ ನೋಡಿ ಮುಂದ ಬಂದ ಯುವಕ ಯುವತಿಯರು ರೊಟ್ಟಿ ಪಲ್ಯ, ಅನ್ನ, ಪಲಾವ್ ಪಾಕೆಟಗಳು, ನೀರಿನ ಬಾಟ್ಲಿಗಳು ದಿನ್ನಾ ಹಂಚಲತಾರ. ಬೀದರ ಬ್ರಿಮ್ಸ ದವಾಖಾನಿದಾಗ ರೊಟ್ಟಿ ಹಂಚೋರ ಬರ ಸಲ್ಯಾಕ ರೋಗಿಗಳು, ರೋಗಿ ಸಂಟ ಇರೊರು ಕಾಯ್ಕೋತ ನಿಂದುರ್ತರ. ಹಿಂದಕ ದೊಡ್ಡ ದೊಡ್ಡ ಫಂಕ್ಷನ್ ಹಾಲ್ದಾಗ ಸಾವಿರಾರ ಮಂದಿಗ ನಮೂನಾ ನಮೂನಾ ಅಡಗಿ ಮಾಡಿ ನೀಡಿ ದೊಡ್ಡಸ್ತನಕಿ ತೋರಿಸಿದೆವು. ಆದರ ಇವತ್ತೇನ ದವಾಖಾನ್ಯಾಗ ಹಂಚಲತಾರ ಅದರಷ್ಟು ತೃಪ್ತಿ ಸಾವಿರ ಮಂದಿಗ ಉಣ್ಸದರಾಗ ಇಲ್ಲರಿ ಅಂತ ಒಬ್ಬ ಯುವಕ ಹೇಳ್ತಾನ. ಊಟ-ನೀರು ಇವತ್ತ ಯಾರಿಗ ಖರೆ ಖರೆ ಜರೂರತ ಅವರಿಗ ಸಿಗಲತುದ.
ಇದು ಸರಕಾರ ಮಾಡಬೇಕಂತ ವಿಚಾರ ಮಾಡದ ಖೀನಾ ನಾವ್ ನಾವೇ ಸೇರಕೊಂಡ ಮಾಡಿದ್ರ ಸರಕಾರದ ವ್ಯವಸ್ಥಾ ಭಾಗ ಕಮ್ಮಿ ಆಯ್ತುದ. ಎಲ್ಲೆಲ್ಲಿ ಹಸಿವರು ಹರ ಅಲ್ಲಲ್ಲಿ ಹೋಗಿ ಹುಡುಕಿ ಊಟ ನೀರು ಕುಡ್ಲತಾರ ಮೆಚ್ಚಬೇಕು. ಕಷ್ಟ ನೋಡಿ ಕೈಕಟ್ಟಿ ಕೂಡ ಮಂದಿ ಅಲ್ಲ ಇವ್ರು. ಕಷ್ಟಕ್ಕ ದೂರ ಮಾಡ್ಲಾಕ ಹಗಲು ರಾತ್ರಿ ದುಡಿಯೊ ಮಂದಿ ಹರ ಇವ್ರು. ಬೀದರ ಜಿಲ್ಲಾದಾಗ ಬಹಳಷ್ಟು ಕಡಿ ಅನ್ನದಾಸೋಹ ನಡದದ ಭಾಳ ಮಂದಿ ಕೈಜೋಡಸ್ಯಾರ, ಛಲೋ ಊಟನೇ ಕುಡ್ಲತಾರ, ಥೊಡೆ ಮಂದಿ ನಾಷ್ಟಾ ಕುಡ್ಲತಾರ ಇನ್ ಥೊಡೆ ಜ್ಯೂಸ್, ಕಾಡಾ, ಮಾಸ್ಕ, ಸ್ಯಾನಿಟೈಸರ್ ಹಂಚಲತಾರ. ಸೇವಾ ಭಾರತಿ, ಆರೋಗ್ಯ ಭಾರತಿ, ಮಾನವತಾ ಫೌಂಡೇಶನ್, ಗುರುದ್ವಾರಾ ಕಮಿಟಿ, ವಿಶ್ವಹಿಂದು ಪರಿಷತ್-ಬಜರಂಗದಳ, ವಚನ ಚಾರಿಟೇಬಲ್ ಟ್ರಸ್ಟ, ಹವಾ ಮಲ್ಲಿನಾಥ ಸ್ವಾಮಿಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ, ಬಹಳಷ್ಟು ಮಿತ್ರ ಮಂಡಳಿದವರು, ಹೆಸರು ಹೇಳಬಯಸದ ಅನೇಕ ಮನಸ್ಸುಗಳು ಸಂಘಟನೆದವರು ಯುವಕ ಮಂಡಳಿಗಳು ಇಂತ ಕಾರ್ಯ ಮಾಡ್ಲತಾರ. ಒಂಥೊಡೆ ಮನೆಯವರೆ ತಾವೇ ಸ್ವತಃ ಈ ಕೆಲಸನೂ ಮಾಡ್ಲತಾರ. ಹೆಸರ ಇರಲಿ ಬ್ಯಾಡಂದವ್ರು ಬಿಡ್ಲಿ ಹಸಿದ ಹೊಟ್ಟಿಗ ಉಳ್ಳಾಕ ಸಿಗಲಿ ಇದು ಇವತ್ತಿಂದ ಜರೂರತ್ ಅದ. ಆಪತ್ ಬಂದಾಗ ಎಲ್ಲರೂ ಸೇರಿ ಕೆಲ್ಸ ಮಾಡ್ಬೇಕು.
ಸರಕಾರಕ್ಕ ಬೈದು ಟೈಂ ಹಾಳ ಮಾಡಬೇಡ್ರಿ ನಮ್ದೆನಾರ ವಿಚಾರ ಪರಿಹಾರ ಇದ್ದುರ ಅಧಿಕಾರಿಗಳಿಗ ತಿಳಸರಿ. ನಾವು ನಮ್ಮಂತೋರು ಸೇರಕೊಂಡ ನಮ್ಮೂರಾಗ ನಮ್ಮ ಏರಿಯಾದಾಗ ಕೆಲ್ಸ ಮಾಡೋಣಲ್ರಿ. ಪ್ರಜೆಯಾಗಿ ಒಂದಿಷ್ಟು ಕಷ್ಟಕಾಲದಾಗ ಕೆಲ್ಸ ಮಾಡೋಣ ಬರ್ರಿ. ನಾಲ್ಕಕ್ಷರ ಬರದುರ ಹಸಿದವರ ಹೊಟ್ಟಿ ತುಂಬಾಲ್ದು ತಿಳ್ಕೊರಿ.
ಅನ್ನದಾಸೋಹ ನಮ್ಮ ಪರಂಪರಾ ಅದ, ನಾವೇ ಮುಂದವರಿಸಬೇಕಲ್ರಿ. ಕೂತು ಕಾಲ ಕಳಿಬ್ಯಾಡ್ರಿ ನಿಂದರಬ್ಯಾಡ್ರಿ ಮುಂದ ಹೆಜ್ಜಿ ಇಡ್ರಿ.
Vardraj Bavge